ಬಸ್ಸು ಹತ್ತುತ್ತೇವೆ. ಸೀಟು ಸಿಕ್ಕಿದರೆ ಕೂರುತ್ತೇವೆ. ಕಂಡಕ್ಟರು 'ಎಲ್ಲಿಗೆ?' ಅಂತ ಕೇಳುತ್ತಾನೆ. ಏನೋ ಹೇಳುತ್ತೇವೆ. ಆತ ಟಿಕೀಟು ಹರಿದು 'ಎಲ್ಲಿಂದ' ಎಂಬ ಕಾಲಮ್ಮಿನಲ್ಲಿ ಎರಡು ತೂತು, 'ಎಲ್ಲಿಗೆ' ಎಂಬ ಕಾಲಮ್ಮಿನಲ್ಲಿ ಎರಡು ತೂತು ಮಾಡಿ ಕೊಡುತ್ತಾನೆ. ಆತ ಅದೇನು ಮಾಡಿಕೊಟ್ಟನೋ ನಮಗೇನು ಗೊತ್ತು? ಅವನ ಕೋಡ್ಸ್ ನಮಗರ್ಥವಾಗುವುದಿಲ್ಲ. ಡ್ರೈವರು ಡ್ರೈವ್ ಮಾಡುತ್ತಿದ್ದಾನೆ. ಎಲ್ಲಿಗೆ ತಲುಪಿಸುತ್ತಾನೋ? ಯಾರಿಗೆ ಗೊತ್ತು? ತಲುಪಿಸುತ್ತಾನೆ ಎಂಬ ಧೈರ್ಯ ಅಷ್ಟೆ. ಊಹೂಂ, ನಾನು ಆಧ್ಯಾತ್ಮದ ಬಗ್ಗೆ ಹೇಳುತ್ತಿಲ್ಲ; ಬದುಕಿನ ಬಗ್ಗೆ ಹೇಳುತ್ತಿದ್ದೇನೆ..

* * *

ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ಬಿ. ದೊಡ್ಡೇರಿ ಎಂಬ ಪುಟ್ಟ ಹಳ್ಳಿಯಲ್ಲಿ ಸಾವಿರದೊಂಭೈನೂರ ಎಂಬತ್ತೈದನೇ ಇಸವಿ ಮೇ ತಿಂಗಳ ಹನ್ನೆರಡನೇ ತಾರೀಖು ರಾತ್ರಿ ಹತ್ತು ಗಂಟೆ ಹೊತ್ತಿಗೆ ಗೌರಮ್ಮ ಮತ್ತು ಶ್ರೀಧರ ಮೂರ್ತಿ ಎಂಬ ದಂಪತಿಗಳ ಪುತ್ರನಾಗಿ ನಾನು ಹುಟ್ಟಿದ್ದು ನನಗೆ ನೆನಪಿಲ್ಲ; ಕೇಳಿ ತಿಳಿದಿದ್ದೇನೆ ಅಷ್ಟೆ. ನನಗೆ ನೆನಪಿರುವುದು ಅಂದರೆ ಅದೇ ಊರಿನಲ್ಲಿ ಗೆಳೆಯರೊಂದಿಗೆ ಅನ್ನ-ಆಸೆ, ಚಿನ್ನಿ-ದಾಂಡು, ಕಳ್ಳ-ಪೋಲೀಸ್, ಕೆರೆ-ದಡ, ಹುಲಿ-ಹಸು ಆಟಗಳನ್ನು ಆಡಿದ್ದು. ಅಪ್ಪ ನನಗಾಗಿ ಬಾಲಮಂಗಳ ತಂದುಕೊಡುವುದರೊಂದಿಗೆ ನಾನು ಪಠ್ಯೇತರ ಓದಿಗೆ ನನ್ನನ್ನು ತೊಡಗಿಸಿಕೊಂಡೆ. ಸಾಹಿತ್ಯಾಸಕ್ತನಾಗಿದ್ದ ಅಪ್ಪ ಲೈಬ್ರರಿಯಿಂದ ತರುತ್ತಿದ್ದ ಕಾದಂಬರಿಗಳ ಮೇಲೆ, ಮನೆಗೆ ಬರುತ್ತಿದ್ದ ಮ್ಯಾಗಜೀನುಗಳ ಮೇಲೆ ಕಣ್ಣಾಡಿಸುತ್ತಿದ್ದೆ. ಹಾಗೇ ಸಾಹಿತ್ಯದಲ್ಲಿ ಆಸಕ್ತಿ ಕುದುರಿತು. ಈಗಂತೂ ಫುಲ್-ಟೈಮ್ ಸಾಹಿತ್ಯಾಸಕ್ತ!

ನನ್ನ ಡಿಪ್ಲೋಮಾ ಓದನ್ನು ಸೊರಬದಲ್ಲಿ ಮುಗಿಸಿ ಮುಂದೆ 'ಏನೇನೋ' ಮಾಡಬೇಕು ಎಂದುಕೊಂಡು, ಕನಸುಗಳನ್ನು ತುಂಬಿದ ದೊಡ್ಡ ಮೂಟೆಯೊಂದನ್ನು ಹೊತ್ತುಕೊಂಡು ಬೆಂಗಳೂರಿಗೆ 'ಹಾರಿ' ಬರುವುದರೊಂದಿಗೆ  ನನ್ನ ಬದುಕಿನ ಎರಡನೇ ಮಜಲು ಶುರುವಾಗಿದೆ. ನನ್ನ ಸಾಹಿತ್ಯಾಸಕ್ತಿಯನ್ನು ತಣಿಸಲೋಸುಗ ಓದಿದ, ಓದುತ್ತಿರುವ ಫಲವಾಗಿ ಈಗೀಗ ಅಷ್ಟಿಷ್ಟು ಬರೆಯುತ್ತಿದ್ದೇನೆ. ಹಿಂದೆ ಮೂರ್ನಾಲ್ಕು ಬಾರಿ ಕವಿತೆ-ಗಿವಿತೆ ಗೀಚಿ ಅದು ಆ-ಈ ಪತ್ರಿಕೆಗಳಲ್ಲಿ  ಪ್ರಕಟವಾಗಿರುವುದೂ ಸುಳ್ಳೇನಲ್ಲ. ಈಗ, ನಾನು 'ಈಗಿನ ಕಾಲದವ'ನಾದ್ದರಿಂದ, ಬರೆದಿದ್ದನ್ನೆಲ್ಲ ಒಂದು ಬ್ಲಾಗು ಓಪನ್ನು ಮಾಡಿ ಅದರಲ್ಲಿ ಬಸಿದಿಡುವುದನ್ನು ರೂಢಿಸಿಕೊಂಡಿದ್ದೇನೆ. ಆ ಬ್ಲಾಗಿನಲ್ಲಿ ನನ್ನ ಸವಿನೆನಪುಗಳು, ಭಾರೀ ಕನಸುಗಳು, ಮತ್ತು ಇವುಗಳ ತಪನೆಯಲ್ಲೇ ಕಳೆದುಹೋಗುತ್ತಿರುವ ನನ್ನ 'ಇವತ್ತು'ಗಳ ಚಿತ್ರಣ ನಿಮಗೆ ಸಿಗುತ್ತದೆ.

ಹಾಗೆಯೇ, ನಿಮಗೆ ಇಲ್ಲಿಂದ ನನ್ನ 'ಜೀವನದ ತಿರುಗಾಟ' ಮತ್ತು 'ತಿರುಗಾಟದ ಜೀವನ'ದ ಫೋಟೋಗಳಿಗೆ ಲಿಂಕು ಸಿಗುತ್ತದೆ. ಪ್ರತೀ ತಿಂಗಳು ಒಂದಷ್ಟು ಪುಸ್ತಕಗಳನ್ನು  ಖರೀದಿಸುತ್ತಿದ್ದೇನೆ; ಹಾಗೆ ಕೊಂಡ ಪುಸ್ತಕಗಳ ಪಟ್ಟಿಯನ್ನು 'ಮೈ ಲೈಬ್ರರಿ' ಯಲ್ಲಿ ಕಾಣಬಹುದು. ಎರವಲು ಬೇಕಿದ್ದಲ್ಲಿ ಕೊಡಲಡ್ಡಿಯಿಲ್ಲ: ಆದರೆ ನೀವು ನನ್ನ ಸ್ನೇಹಿತರ ಪಟ್ಟಿಯಲ್ಲಿ 'ಮೆಂಬರ್ಶಿಪ್' ಹೊಂದಿರಬೇಕು ಮತ್ತು ಪಡೆದ ಪುಸ್ತಕವನ್ನು ಜೋಪಾನವಾಗಿ ಹಿಂದಿರುಗಿಸಬೇಕು! ಮೆಂಬರ್ಶಿಪ್ ಪಡೆಯಲು ನೀವು ಮಾಡಬೇಕಾದ್ದು ಇಷ್ಟೇ: ಇಲ್ಲಿರುವ 'ಮೈ ಪ್ರೊಫೈಲ್' ಎಂಬ ಕೊಂಡಿಯನ್ನು ಕ್ಲಿಕ್ಕಿಸಿ, ಸೂಚನೆಗಳನ್ನು ಪಾಲಿಸಿದರಾಯಿತು.

* * *

ಕೈ ಮಾಡಿದವರನ್ನೆಲ್ಲಾ ಹತ್ತಿಸಿಕೊಂಡು ಮುಂದೆ ಹೋಗುತ್ತದೆ ಬಸ್ಸು. ಕೆಲವರಿಗೆ ಸೀಟು ಸಿಗುತ್ತದೆ; ಕೆಲವರು ನಿಂತೇ ಪಯಣಿಸಬೇಕಾಗುತ್ತದೆ. ಯಾರು ಹತ್ತಲೀ ಬಿಡಲಿ, ಬಸ್ಸು ಓಡುತ್ತಲೇ ಇರುತ್ತದೆ ಅಲ್ಲವೇ?